ಸಣ್ಣ ಮಟ್ಟದಲ್ಲಿ ಕೆಲವೇ ಮಂದಿ ಸದಸ್ಯರಿಂದ ಸ್ಥಾಪನೆಗೊಂಡ, ಪಡಿತರ ಹಾಗೂ ಕೃಷಿ ಸಾಮಗ್ರಿಗಳ ವ್ಯವಹಾರವನ್ನೇ ಮುಖ್ಯ ಕಾರ್ಯವಾಗಿಟ್ಟುಗೊಂಡಿದ್ದ ಸಹಕಾರ ಸಂಘವೊಂದು ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಬೃಹತ್ಸಾಧನೆಯೆ ಸರಿ.
1918 ರಲ್ಲಿ ಸ್ಥಾಪನೆಗೊಂಡ ಈ ಬಡಗಬೆಟ್ಟು ಸಹಕಾರ ಸಂಘವು ಆರಂಭದಲ್ಲಿ ನಿಯಮಿತ ವ್ಯವಹಾರ ಮಾಡುತ್ತಿದ್ದು, 1975 ರ ನಂತರ ಕೆಲ ಬಾಹ್ಯ ಕಾರಣಗಳಿಂದಲೂ ಅನಿವಾರ್ಯ ಮುಗ್ಗಟ್ಟುಗಳಿಂದಲೂ ಕುಸಿತ ಕಂಡಿತು. 1979-80 ರ ಸಾಲಿಗೆ ಪೂರಾ ವ್ಯವಹಾರ ಸ್ಥಗಿತಗೊಂಡಾಗ ಸಹಕಾರ ಇಲಾಖೆಯ ಮಧ್ಯಪ್ರವೇಶದಿಂದಾಗಿ ಮುಚ್ಚಿಹೋಗದೆ ಕೆಲವು ಸಹಕಾರಿ ಧುರೀಣರ ಮುತುವರ್ಜಿಯಿಂದ ಪುನಶ್ಚೇತನಗೊಂಡಿತು. ಶ್ರೀ ಟಿ. ಶಂಭು ಶೆಟ್ಟಿ, ದಿವಂಗತ ಡಾ| ಯಸ್. ರಮಾನಂದ ಭಟ್ ಇವರ ಸತತ ಪ್ರಯತ್ನಗಳಿಂದಲೂ ಆಗತಾನೇ ಸಂಸ್ಥೆಗೆ ಸೇರಿದ, ಉತ್ಸಾಹಿ, ಪರಿಶ್ರಮಿ ಪ್ರಥಮ ಸಿಬ್ಬಂದಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಅವರ ಸ್ವಾರ್ಥರಹಿತ, ಅಹರ್ನಿಶಿ ದುಡಿಮೆಯಿಂದಲೂ ಆರ್ಥಿಕ ವ್ಯವಹಾರಗಳ ಜೊತೆಗೂಡುವಿಕೆಯಿಂದಲೂ 1980 ರಿಂದ ಪುನರುಜ್ಜೀವಿತಗೊಂಡು ಸತತವಾಗಿ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತಾ ಬಂದಿತು. ಬಡಗಬೆಟ್ಟು ಪತ್ತಿನ ಸಹಕಾರ ಸಂಘವೆಂಬ ಪುನರ್ನಾಮಕರಣದೊಂದಿಗೆ ಜಿಲ್ಲಾ –ರಾಜ್ಯ ಮಟ್ಟದ ಪ್ರಶಸ್ತಿಗಳಲ್ಲದೇ ಎರಡು ಬಾರಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಪತ್ತಿನ ಸಹಕಾರ ಸಂಘವೆಂಬ ಪ್ರಶಸ್ತಿಯೊಂದಿಗೆ ಇಂದು ಮಂಚೂಣಿಯಲ್ಲಿದೆ. ಮುಂದಿನ ವರ್ಷ ಶತಮಾನವನ್ನು ಪೂರೈಸುವ ಈ ಸಂಸ್ಥೆ ಈಗಲೂ ವ್ಯವಹಾರ ಹಾಗೂ ಇತರ ಚಟುವಟಿಕೆಗಳಲ್ಲಿ ಮೊದಲ ಸ್ಥಾನದಲ್ಲಿ ಸತತವಾಗಿ ಮುಂದುವರಿಯುತ್ತಿದೆ. ಇಂತಹ ಅಗ್ರಗಣ್ಯ ಸಂಸ್ಥೆಯೊಂದರ ಭಾಗವಾಗುವುದು ನಮಗೆಲ್ಲರಿಗೂ ಸಂತಸ ಹಾಗೂ ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಆರು ಗ್ರಾಮೀಣ ಹಾಗೂ ಎರಡು ಪಟ್ಟಣ ಶಾಖೆಗಳ ಮೂಲಕ ಗ್ರಾಮೀಣ ಜನರ ಅಗತ್ಯತೆಗಳಿಗೆ ಸ್ಪಂದಿಸುತ್ತಾ ನಗುಮಖದ, ಕ್ಷಿಪ್ರಸೇವೆ ನೀಡುವ ಸಿಬ್ಬಂದಿಗಳು, ಅವರ ನೇತೃತ್ವವಹಿಸಿದ ಯಶಸ್ವೀ ಪ್ರಧಾನ ವ್ಯವಸ್ಥಾಪಕರ ತಂಡದೊಂದಿಗೆ ಪ್ರಶಂಸನೀಯ ಸೇವೆ ನೀಡುತ್ತಾ ಬಂದಿದೆ. ಶೀಘ್ರದಲ್ಲೇ ಇನ್ನೆರಡು ಶಾಖೆಗಳು ಆರಂಭಗೊಳ್ಳಲಿವೆ.
ಈ ಶತಮಾನೋತ್ಸವದ ಹೊಸ್ತಿಲಲ್ಲಿ ಮತ್ತೊಮ್ಮೆ ಜನ ಸೇವಾ ದೀಕ್ಷೆಯೊಂದಿಗೆ ಸಮಸ್ತ ಸದಸ್ಯರ ಹಾಗೂ ಸಮಾಜದ ಅಗತ್ಯತೆಗಳಿಗೆ ಸಕ್ರಿಯ ಸ್ಪಂದನೆಯೊಂದಿಗೆ ಈ ಸಂಸ್ಥೆಯನ್ನು ಅಭಿವೃದ್ಧಿ ಹಾಗೂ ಸಮಾಜಮುಖಿ ಸೇವೆಯಲ್ಲಿ ಮುಂದಕ್ಕೆ ಒಯ್ಯುತ್ತೇವೆಂಬುದು ನಾವು ನೀಡುವ ಆಶ್ವಾಸನೆಯಾಗಿದೆ. ಸದಸ್ಯರ ಹಾಗೂ ಗ್ರಾಹಕ ಬಂಧುಗಳ ಅವಿರತ ಬೆಂಬಲ, ಪ್ರೋತ್ಸಾಹ, ಸಹಕಾರಗಳನ್ನು ನಿರೀಕ್ಷಿಸುತ್ತೇವೆ.